ನೆಲಗಿಡುಗ -
	ಉಷ್ಣವಲಯದಲ್ಲಿ ವಿಶೇಷವಾಗಿ ವಾಸಿಸುವ ಒಂದು ಬಗೆಯ ಜೇಡ (ಟ್ಯ್ರಾಪ್‍ಡೋರ್ ಸ್ಟೈಡರ್). ಸಮಶೀತೋಷ್ಣವಲಯದಲ್ಲಿಯೂ ಕಾಣಸಿಗುವುದುಂಟು. ಜೇಡಸಮೂಹದಲ್ಲೇ ಇದು ದೈತ್ಯಾಕಾರದ ಜೀವಿಯೆನಿಸಿದೆ. ಕೆಲವೊಮ್ಮೆ 8 ಸೆಂಮೀ ಉದ್ದ 1.5 ಸೆಂಮೀ ದಪ್ಪ ಇರುವುದುಂಟು. ಇದಕ್ಕೆ 4 ಜೊತೆ ದಪ್ಪ ಕಾಲುಗಳಿವೆ. ಕಾಲುಗಳು ಸುಮಾರು 25 ಸೆಂಮೀ ಅಗಲ ಹರಡಿರುವುವು. ಇದರ ಮೈಬಣ್ಣ ಕಪ್ಪು, ಮೈತುಂಬ ಒತ್ತಾಗಿ ಬೆಳೆದ ರೋಮದಂಥ ತಂತುಗಳಿವೆಯಾಗಿ ನೋಡಿದಾಕ್ಷಣ ಭಯ ಹುಟ್ಟಸುವಂತಿದೆ. ಆದರೂ ಇದು ಹಾನಿ ಎಸಗದ ಜೀವಿ.

	ನೆಲಗಿಡುಗಕ್ಕೆ ಒಂದು ಜೊತೆ ಕೊಂಡಿ ಕಾಲುಗಳುಂಟು. ಇವುಗಳ ಸಹಾಯದಿಂದ ನೆಲದಲ್ಲಿ ಬಿಲ ತೋಡುತ್ತದೆ. ಹೀಗೆ ರಚಿತವಾದ ಬಿಲ ಅನೇಕ ಸುರಂಗಗಳಿಂದ ಕೂಡಿರುವುದು. ಬಿಲದುದ್ದಕ್ಕೂ ತನ್ನ ಒಂದು ಜೊತೆ ರೇಷ್ಮೆ ಗ್ರಂಥಿಗಳಿಂದ ಕೂಡಿರುವುದು. ಬಿ¯ದ ಹೊರ ದ್ವಾರಕ್ಕೆ ರೇಷ್ಮೆಯಿಂದಲೇ ರಚಿಸಿದ ಮುಚ್ಚಳವುಂಟು. ಮುಚ್ಚಳಕ್ಕೆ ಕೀಲು ಇರುವುದರಿಂದ ಇದನ್ನು ಸುಲಭವಾಗಿ ಮುಚ್ಚಲು ಮತ್ತು ತೆಗೆಯಲು ಆಗುತ್ತದೆ. ಮುಚ್ಚಳ ಬಣ್ಣ ಸುತ್ತಲ ನೆಲದ ಬಣ್ಣವನ್ನೆ ಹೋಲುವುದರಿಂದ ನೆಲಗಿಡುಗದ ಬಿಲವನ್ನು ಸುಲಭವಾಗಿ ಗುರುತಿಸಲು ಸಾಧ್ಯ. ಬಿಲದ ಮುಚ್ಚಳವನ್ನು ಬಿಗಿಯಾಗಿ ಮುಚ್ಚುವುದರಿಂದ ಮಳೆನೀರು ಸಹ ಬಿಲಕ್ಕೆ ನುಗ್ಗುವುದಿಲ್ಲ. ಇದರಿಂದÀಲೇ ಇವಕ್ಕೆ ಟ್ರ್ಯಾಪ್‍ಡೋರ್ ಸ್ಪ್ಯೆಡರ್ಸ್ ಎಂಬ ಹೆಸರು ಬಂದಿದೆ. ಬೇಟೆಯನ್ನು ಹಿಡಿಯಲು ಮತ್ತು ತನ್ನ ಶತ್ರುಗಳಿಂದ ಪಾರಾಗಲು ಬಿಲ ಬಹಳ ಸಹಾಯಕಾರಿ.

	ನೆಲಗಿಡುಗಗಳು ಮಳೆಗಾಲದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಗಂಡು ಜೇಡ ತನ್ನ ಕೊಂಡಿ ಕಾಲುಗಳಿಂದ ವೀರ್ಯವನ್ನು ತೆಗೆದು ಹೆಣ್ಣಿನ ಜನನಾಂಗದಲ್ಲಿ ಸುರಿಸುವುದು. ಅನಂತರ ಹೆಣ್ಣು ಗರ್ಭಾಂಕುರಗೊಂಡ ಮೊಟ್ಟೆಗಳನ್ನು ಬಿಲದಲ್ಲಿಟ್ಟು ಸಂರಕ್ಷಿಸುವುದು. ಮರಿಗಳು ಪ್ರಾಪ್ತಸ್ಥಿತಿಗೆ ಬರಲು ಸುಮಾರು ನಾಲ್ಕು ವರ್ಷಗಳು ಬೇಕಾಗುವುದು. ಬೆಳವಣಿಗೆ ಹಂತದಲ್ಲಿ ಇವು ಅನೇಕ ಬಾರಿ ಪೊರೆ ಬಿಡುತ್ತವೆ. ವಿಚಿತ್ತವೆಂದರೆ ಈ ಬಗೆಯ ಜೇಡಗಳು 20 ವರ್ಷಗಳು ಬದುಕುವುದು; ಆಹಾರವೇ ಇಲ್ಲದೆ ಎರಡೂವರೆ ವರ್ಷ ಕಾಲ ಜೀವಚಿತವಾಗಿರುವುದು ಮತ್ತು ಬೇಸಿಗೆಯಲ್ಲಿ ನೀರಿಲ್ಲದೆ ಎರಡೂವರೆ ತಿಂಗಳ ಕಾಲ ಇರುವುದು.

	ನೆಲಗಿಡುಗ ಸಂದಿಪದಿ ವಿಭಾಗದ, ಆರ್ಯಾಕ್ನಿಡ ವರ್ಗದ, ಆರ್ಯಾನಿಡ ಗಣದ, ಆರ್ಥೊನ್ಯಾತ ಉಪಗಣದ, ಟಿನಿಜಿಡೀ ಕುಟುಂಬಕ್ಕೆ ಸೇರಿದೆ. ಟರ್ಯಾಂಟುಲ ಜೇಡಗಳು ಸಹ ಇದೇ ಉಪಗಣಕ್ಕೆ ಸೇರಿವೆ.
(ಜಿ.ಎಂ.ಬಿ.; ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ